Sunday, February 27, 2011

ಆ ಒಂದು ದಿನದ ಡೈರಿ ...

ಸಂಕ್ರಮಣದ ಸಂಜೆಯಲಿ .ಪ್ರೇಮ ಕವಿಯ ಪಾರ್ಕಿನಲಿ...

ಕೆ.ಎಸ್.ನರಸಿಂಹಸ್ವಾಮಿ ಉದ್ಯಾನವನ. ಅದು ನನ್ನ ರೂಮಿಗೆ ಐದು ನಿಮಿಷದ ನಡಿಗೆಯ ದೂರದಲ್ಲಿದೆ. ಮನಸ್ಸಿಗೆ ಏನೋ ಹೊಸತು ಬೇಕೆಂದಾಗಲೆಲ್ಲ ಕೆ.ಎಸ್.ಎನ್ ಪಾರ್ಕಿಗೆ ಹೋಗಿ ಕೂರುತ್ತೇನೆ. ಹೆಚ್ಚಾಗಿ ಸಂಜೆ ಆರರ ನಂತರ ಹೋಗಿ ಕೊನೆಗೆ ರಾತ್ರಿ ಎಂಟು ಘಂಟೆ ತನಕ ಅಲ್ಲಿ ಕೂತು ಎದ್ದು ಬರುವುದು ನನ್ನ ರೂಢಿ.ಕೆಲವೊಮ್ಮೆ ಒಬ್ಬನೇ ಹೋಗಿ ಕೂರುತ್ತೇನೆ.ಬಹುತೇಕ ಸಮಯದಲ್ಲಿ ನನ್ನ ತಮ್ಮ ನನಗೆ ಜೊತೆ ನೀಡುತ್ತಾನೆ. ಪಾರ್ಕಿನ ಮೇನ್ ಗೇಟಿನ ಎಡಕ್ಕೆ ಪಾರ್ಕಿನ ಮೂಲೆಯಲ್ಲಿ ಒಂದು ಕಲ್ಲು ಬೆಂಚ್ ಇದೆ. ನಮಗೂ ಆ ಬೆಂಚಿಗು ಏನು ಋಣಾನುಬಂಧವೋ ಗೊತ್ತಿಲ್ಲ.ನಾವು ಹೋದಾಗಲೆಲ್ಲ ಆ ಕಲ್ಲು ಬೆಂಚು ಖಾಲಿಯಾಗಿ ಕುಳಿತು ನಮ್ಮನ್ನು ಸ್ವಾಗತಿಸುತ್ತೆ. ಈತನಕ ಒಮ್ಮೆಯೂ ನಾವು ಬೇರೆ ಬೆಂಚನ್ನು ಹುಡುಕಿಕೊಂಡು ಹೋಗುವ ಪ್ರಸಂಗ ಎದುರಾಗಿಲ್ಲ. ಅಷ್ಟರ ಮಟ್ಟಿಗೆ ಆ ಬೆಂಚ್ ನಮ್ಮ ಹೆಸರಿಗೆ ಆಗಿಹೋಗಿದೆ.

ಆ ಪಾರ್ಕಿಗೆ ಹೋಗಿ ಕುಳಿತು ಸುಮ್ಮನೆ ಸುತ್ತಲ ವ್ಯವಹಾರಗಳನ್ನ ,ತರಹೇವಾರಿ ಜನಗಳನ್ನ ಕಣ್ಣಲ್ಲಿ ತುಂಬಿಕೊಳ್ಳುವುದೇ ನಿಜಕ್ಕೂ ಖುಷಿ. ಪಾರ್ಕ್ ಎಂದರೆ ನನ್ನ ಪಾಲಿಗೆ ಸಂಜೆ ಹೊತ್ತಿನಲ್ಲಿ ಒಂದೆಡೆ ಜಮೆಯಾದ ಪುಟ್ಟ ಜಗತ್ತು. ಅದು ದೊಡ್ಡ ಜಗತ್ತಿನ ಪುಟ್ಟ ಪ್ರತಿನಿಧಿ. ಎಲ್ಲ ವಯೋಮಾನದ ,ಎಲ್ಲ ಮನೋಧರ್ಮದ ಜನಗಳು ಅಲ್ಲಿ ಸಿಗುತ್ತಾರೆ. ಒಬ್ಬಬ್ಬರೂ ಒಂದೊಂದು ವಿಶಿಷ್ಟ ಚಿತ್ರದಂತೆ ಕಾಣುತ್ತಾರೆ. ಎಲ್ಲ ಚಿತ್ರಗಳೂ ಒಂದಕ್ಕಿಂತ ಒಂದು ಭಿನ್ನ ಹಾಗು ಆಸಕ್ತಿದಾಯಕ.

ಅದು ಪ್ರೇಮ ಕವಿಯ ಪಾರ್ಕು.ಆದರೆ ಅಲ್ಲಿ ಪ್ರೇಮಿಗಳು ಕಾಣಸಿಗುವುದು ತುಂಬಾ ಕಡಿಮೆ. ಸುತ್ತ ನಾಲ್ಕು ಕಡೆ ರಸ್ತೆಯಿಂದ ಸುತ್ತುವರಿದು ನಡುವೆ ದ್ವೀಪದಂತೆ ಆ ಪಾರ್ಕಿದೆ. ಸುತ್ತ ರಸ್ತೆ ಇದೆ ಎಂದ ಮೇಲೆ ಜನಗಳು ಇದ್ದೇ ಇರುತ್ತಾರೆ. ಬಹುಶಃ ಆ ಕಾರಣಕ್ಕೆ ಪ್ರೇಮ ಕವಿಯ ಪಾರ್ಕು ಪ್ರೇಮಿಗಳ ಪಾಲಿಗೆ ಸ್ವರ್ಗವಲ್ಲ. ಆಗೊಮ್ಮೆ ಈಗೊಮ್ಮೆ ತೆಳುವಾಗಿ ಕೆಲವು ಪ್ರೇಮಿಗಳು ಕಾಣಲಿಕ್ಕೆ ಸಿಗುತ್ತಾರೆ.ಆದರೆ ಅವರೆಲ್ಲ ಬೇರೆ ಪಾರ್ಕಿನ ಪ್ರೇಮಿಗಳಿಗಿಂತ ತೀರಾ ತೀರಾ ಭಿನ್ನ. ಕೆ.ಎಸ್.ಎನ್.ಪಾರ್ಕಿನ ಪ್ರೇಮಿಗಳೆಲ್ಲ ತುಂಬಾ ಸಭ್ಯರು. ಈ ಸಭ್ಯತೆಗೆ ಕಾರಣ ಸುತ್ತ ಸುತ್ತುವರಿದು ನಿಂತ ರಸ್ತೆಗಳು ಎಂದು ನಾನು ವಿಶೇಷವಾಗಿ ಒತ್ತಿ ಹೇಳಬೇಕಿಲ್ಲ. ಕೆಲವರು ಮೂಲತಃ ಸಭ್ಯರಂತೆ ಕಾಣುತ್ತಾರೆ. ಇನ್ನು ಕೆಲವರು ಪರಿಸ್ಥಿತಿಯ ಅನಿವಾರ್ಯಕ್ಕೆ ಸಿಕ್ಕು ಸಭ್ಯರಾದ ಅವಕಾಶವಂಚಿತರು. ಕೈಗೆ ಬಂದದ್ದು ಬಾಯಿಗೆ ತಲುಪುವ ಭಾಗ್ಯವಿಲ್ಲದ ನತದೃಷ್ಟರು. ಅವರು ನಗುವಾಗಲೆಲ್ಲ ಅಳಲಾಗದೆ ನಕ್ಕಂತೆ ಕಾಣುತ್ತೆ. ಪ್ರಯತ್ನಪೂರ್ವಕವಾಗಿ ತಮ್ಮ ನಡುವೆ ಒಂದಡಿಯ ಅಂತರ ಬಿಟ್ಟು ಕೂರುವಾಗ ಅಯ್ಯೋ ಪಾಪ ಅನಿಸುತ್ತೆ. ಯಾಕೋ ಗೊತ್ತಿಲ್ಲ.ಅಂಡು ಸುಟ್ಟ ಬೆಕ್ಕು ಬೇಡವೆಂದರೂ ನೆನಪಾಗುತ್ತೆ.

ಪ್ರೇಮಿಗಳೆಲ್ಲ ಹೆಚ್ಚಾಗಿ ನನ್ನದೇ ವಯಸ್ಸಿನವರು. ನನ್ನ ಕಷ್ಟ ಸುಖಗಳೇ ಅವರದ್ದೂ ಕೂಡ .ಆ ಕಾರಣಕ್ಕೆ ಅವರು ನನಗೆ ಅರ್ಥವಾಗುತ್ತಾರೆ. ಈ ಪ್ರೇಮಿಗಳು ಕೆ.ಎಸ್.ಎನ್.ಪಾರ್ಕಿನಲ್ಲಿ ಅಲ್ಪಸಂಖ್ಯಾತರು. ಅಂಕಲ್ಗಳು .ಆಂಟಿಯಂದಿರು ,ಅಜ್ಜಂದಿರು .ಅಜ್ಜಿಯಂದಿರುಗಳು ಇಲ್ಲಿ ಬಹುಸಂಖ್ಯಾತರು. ಅವರು ನನಗೆ ಸುಲಭಕ್ಕೆ ಅರ್ಥವಾಗುವುದಿಲ್ಲ. ಆಂಟಿ ಹಾಗು ಅಂಕಲ್ಗಳ ಹಣೆಯ ಮೇಲಿನ ನೆರಿಗೆ, ಹೊಟ್ಟೆಯ ಮಡಿಕೆಗಳು, ಅಜ್ಜಂದಿರ,ಅಜ್ಜಿಯಂದಿರ ಮುಖದ ಮೇಲಿನ ಮುದುರು, ಕೆಲವೊಮ್ಮೆ ಅವರು ನೋಡುವ ಶೂನ್ಯ ನೋಟ ನನಗೆ ಅರ್ಥವಾಗುವುದಿಲ್ಲ. ಅವರ ಏದುಸಿರು.ಏದುಸಿರ ಜೊತೆ ಜೊತೆಗೆ ಬಿರುಸಾಗುತ್ತ ಹೋಗುವ ನಡಿಗೆಯ ವೇಗದ ಹಿಂದಿನ ದರ್ದು ನನಗೆ ಅರ್ಥವಾಗುವುದಿಲ್ಲ. ಇಷ್ಟು ಕಾಲ ನೆನಪಾಗದ ವ್ಯಾಯಾಮ ಈಗ ಯಾಕೆ ಅನಿವಾರ್ಯವಾಯಿತು ಎಂಬುದು ಅರ್ಥವಾಗುವುದಿಲ್ಲ. ಅಲ್ಲೇ ಕೆಲವರು ನಗೆ ಕೂಟ ಮಾಡಿಕೊಂಡಿದ್ದಾರೆ.ತುಂಬ ಗಂಭೀರವಾಗಿ ಪಾರ್ಕಿಗೆ ಬರುತ್ತಾರೆ.ಸುಖಾಸುಮ್ಮನೆ ಬಿದ್ದು ಬಿದ್ದು ನಕ್ಕಂತೆ ನಕ್ಕು ಮತ್ತೆ ಅಷ್ಟೇ ಗಂಭೀರವಾಗಿ ಮನೆಯ ದಾರಿ ಹಿಡಿಯುತ್ತಾರೆ. ಅವರು ಹಾಗೆ ನಗುವಾಗ ಅವರು ನಕ್ಕಿದ್ದು ನಿಜವಾದ ನಗುವಾ ಅಥವಾ ಅವರೊಳಗೆ ಮಡುಗಟ್ಟಿಹೋದ ಸಂಕಷ್ಟವಾ ಎಂಬುದು ಅರ್ಥವಾಗುವುದಿಲ್ಲ. ನಗುವುದನ್ನೂ .ಖುಷಿಪಡುವುದನ್ನೂ ಒಂದು ಕೆಲಸದಂತೆ ಒಂದು ನಿಗದಿತ ಸಮಯಕ್ಕೆ ಮೀಸಲಾಗಿಸುವ ಮನಸ್ಥಿತಿಯ ಲೆಕ್ಕಾಚಾರಗಳ ಹಿಂದಿನ ಸೂತ್ರ ಅರ್ಥವಾಗುವುದಿಲ್ಲ. ಕೊನೆಗೆ ಅಂಥದ್ದೊಂದು ಲೆಕ್ಕಾಚಾರಕ್ಕೆ ಕಾರಣವಾದ ನಮ್ಮ ನಡುವಿನ ವ್ಯವಸ್ಥೆ ಹೀಗೇಕಾಯಿತು ಎಂಬುದೂ ಅರ್ಥವಾಗುವುದಿಲ್ಲ. ನಾನು ಸುಮ್ಮನೆ ನೋಡುತ್ತೇನೆ. ನನ್ನ ಪರಿಮಿತಿಯಲ್ಲಿ ಯೋಚನೆಗೆ ಬೀಳುತ್ತೇನೆ.

ಎವರ್ ಗ್ರೀನ್ ಅಜ್ಜಂದಿರು

ಇಷ್ಟೆಲ್ಲಾ ಅರ್ಥವಾಗದ ಸಂಗತಿಗಳ ನಡುವೆ ಕೆಲವಷ್ಟು ಚೇತೋಹಾರಿಯಾದ ಅರ್ಥಪೂರ್ಣ ಸಂಗತಿಗಳಿವೆ. ನಾನು ಹಾಗು ನನ್ನ ತಮ್ಮ ಕೂರುವ ಬೆಂಚಿನ ಎದುರು ಒಂದಿಷ್ಟು ಬೆಂಚುಗಳಿವೆ. ಒಂದಿಷ್ಟು ಅಜ್ಜಂದಿರ ಗೆಳೆಯರ ಬಳಗ ಅಲ್ಲಿ ಖಾಯಮ್ಮಾಗಿ ಜಮೆಯಾಗಿರುತ್ತೆ. ಆ ಅಜ್ಜಂದಿರು ಪಾರ್ಕಿಗೆ ಬರುವ ಇತರ ಅಜ್ಜಂದಿರಂತೆ .ಅಂಕಲ್ಗಳಂತೆ ,ಆಂಟಿಗಳಂತೆ ಅಲ್ಲ. ಅವರು ಮುಖ ಗಂಟಿಕ್ಕಿಕೊಂಡು ಕೂತಿದ್ದನ್ನು , ಶೂನ್ಯ ನೋಟದಲ್ಲಿ ಖಾಲಿಯಾಗಿ ಕುಳಿತಿದ್ದನ್ನು ಈತನಕ ನಾನು ಒಂದು ಬಾರಿಯೂ ಕಂಡಿಲ್ಲ. ಅವರಿಗೆ ನಾನು ಎವರ್ ಗ್ರೀನ್ ಅಜ್ಜಂದಿರೆಂದು ಕರೆಯುತ್ತೇನೆ. ಅವರು ಲೋಕಾಭಿರಾಮವಾಗಿ ಹರಟುತ್ತಾರೆ. ಗಲಗಲನೆ ನಗೆಯಾಗುತ್ತಾರೆ. ಅವರ ನಡುವೆ ಚರ್ಚೆಗೆ ಬಾರದ ವಿಷಯಗಳೇ ಇಲ್ಲ. ಆಯಾ ದಿನಗಳ ಎಲ್ಲ ಪ್ರಮುಖ ವಿದ್ಯಮಾನಗಳು ಅಲ್ಲಿ ಚರ್ಚೆಯಾಗುತ್ತವೆ. ಅವರು ತಮ್ಮ ಹರಟೆಯ ನಡುವೆ ವರ್ತಮಾನದ ಜೊತೆ ಜೊತೆಗೆ ಕಳೆದ ನಿನ್ನೆಗಳನ್ನ ಎಳೆದು ತರುತ್ತಾರೆ. ಅವರನ್ನ ಆಲಿಸುತ್ತ ಕುಳಿತರೆ ನನಗೆ ತಿಳಿದುಕೊಳ್ಳಲು ತುಂಬಾ ವಿಷಯಗಳು ಸಿಗುತ್ತೆ . ಅವರನ್ನು ನೋಡುತ್ತಿದ್ದರೆ ತುಂಬಾ ಖುಷಿಯಾಗುತ್ತೆ.

ಸಂಕ್ರಮಣದ ಆ ಸಂಜೆ ....

ಅದು ಸಂಕ್ರಾಂತಿಯ ದಿನದ ಸಂಜೆ.ಅವತ್ತು ಕೂಡ ಪಾರ್ಕಿಗೆ ಹೋಗಿ ಕುಳಿತಿದ್ದೆ .ಪಾರ್ಕ್ ಎಂದಿನಂತೆ ನೂರಾರು ಚಿತ್ರಗಳ ಕೊಲಾಜ್. ಸುಮ್ಮನೆ ನೋಡುತ್ತಾ ಕುಳಿತಿದ್ದೆ. ನಡುವೆ ಹೊಸತೊಂದು ಚೆಂದದ ಚಿತ್ರ ಸೇರಿಕೊಂಡಿತು. ಎಳೆವಯಸ್ಸಿನ ಜೋಡಿಯೊಂದು ಪಾರ್ಕಿನ ಕಾಲು ಹಾದಿಯಲ್ಲಿ ವಾಕಿಂಗ್ ಹೊರಟಿತ್ತು. ಹುಡುಗಿ ತುಂಬು ಗರ್ಭಿಣಿ . ಹುಡುಗಿಯ ನಡಿಗೆಯಲ್ಲಿ ಪ್ರಯಾಸ ಕಾಣುತ್ತಿತ್ತು. ಆದರೆ ಆಕೆಯ ಮುಖದಲ್ಲಿ ತುಂಬಾ ಸಂತೋಷವಿತ್ತು. ಹುಡುಗಿ ಏನೇನೋ ಹೇಳಿಕೊಳ್ಳುತ್ತಾ ಮುಸಿ ಮುಸಿ ನಗುತ್ತಿದ್ದಳು. ಹುಡುಗ ಮಾತ್ರ ಆತಂಕದ ಗೂಡಂತೆ ಕಾಣುತ್ತಿದ್ದ. ಅವಳು ಹೇಳಿದ್ದಕ್ಕೆ .ನಕ್ಕಿದ್ದಕ್ಕೆ ಆತ ಅಷ್ಟಾಗಿ ಗಮನವನ್ನೂ ನೀಡುತ್ತಿರಲಿಲ್ಲ. ಆತ ಆಕೆಯ ತೋಳು ಹಿಡಿದು ಆಕೆಯ ಹೆಜ್ಜೆಯನ್ನೇ ಗಮನಿಸುತ್ತಾ ತುಂಬಾ ಎಚ್ಚರಿಕೆಯಿಂದ ಆಕೆಯನ್ನ ನಡೆಸಿಕೊಂಡು ಬರುವುದರಲ್ಲಿ ಮಗ್ನನಾಗಿದ್ದ. ಆಕೆ ಗರ್ಭಧರಿಸಿದ್ದು ಹುಡುಗನ ಆತಂಕವನ್ನೋ ? ಆಕೆಯ ಖುಷಿಯನ್ನೋ? ಎಂಬುದು ಅರ್ಥವಾಗಲಿಲ್ಲ. ಇವರು ಇಂದಿನಂತೆಯೇ ಮುಂದೆ ಇರುತ್ತಾರ? ಅಥವಾ ಕೆಲವು ವರುಷಗಳ ನಂತರ ಇದೇ ಪಾರ್ಕಿನಲ್ಲಿ ಉಳಿದ ಅಂಕಲ್ಗಳು ಹಾಗು ಆಂಟಿಗಳಂತೆ ಆಗಿ ಹೋಗುತ್ತಾರಾ ? ಎಂಬುದೂ ನನಗೆ ಅರ್ಥವಾಗಲಿಲ್ಲ.

ಅಷ್ಟು ಹೊತ್ತಿಗೆ ನಮ್ಮ ಎವರ್ ಗ್ರೀನ್ ಅಜ್ಜಂದಿರು ಒಬ್ಬೊಬ್ಬರಾಗಿ ಪಾರ್ಕಿಗೆ ಬಂದು ನನ್ನೆದುರಿನ ಬೆಂಚುಗಳಲ್ಲಿ ಸ್ಥಾಪಿತರಾದರು.ಎಂದಿನಂತೆ ಹರಟಿದರು.ಗಲಗಲನೆ ನಗೆಯಾದರು. ನಾನು ಎಂದಿನಂತೆ ಅವರಿಗೆ ಕಿವಿಯಾಗಿ ಕುಳಿತೆ.ಖುಷಿಪಟ್ಟೆ.ಕೊನೆಗೆ ಆ ಅಜ್ಜಂದಿರು ತಮ್ಮತಮ್ಮಲ್ಲೇ ಎಳ್ಳು ಬೆಲ್ಲ ಹಂಚಿಕೊಂಡು ಶುಭಾಶಯ ಹೇಳಿಕೊಂಡರು. ಅಲ್ಲಿ ಅರ್ಥವಾಗದ ಸಂಗತಿಗಳು ಏನೂ ಇರಲಿಲ್ಲ. ಅಲ್ಲಿದ್ದದ್ದು ಕೇವಲ ಖುಷಿ ಖುಷಿ ಹಾಗು ನನ್ನ ನಾಳೆಗಳು ಈ ಅಜ್ಜಂದಿರಂತೆಯೇ ಇರಲಿ ಎಂಬ ಹಾರೈಕೆಯಷ್ಟೇ ...

Friday, February 18, 2011

ಕಾಲಂ 'ಅತಿಥಿ '...

ಅತಿಥಿಗಳು ಬರ್ತಿದ್ದಾರೆ ನನ್ನ ಬ್ಲಾಗ್ ಮನೆಯಂಗಳಕ್ಕೆ .

ಮನೆ ನನ್ನದು. ಓದುಗರ ಉಪಚಾರದ ಉಸ್ತುವಾರಿ ಅವರದು.

ನನ್ನ ಬ್ಲಾಗ್ ಮನೆಯಂಗಳಕ್ಕೆ ಅತಿಥಿಗಳು ಬರುತ್ತಿದ್ದಾರೆ. ಅವರು ಬರುವ ಘಳಿಗೆಯಲ್ಲಿ ನನ್ನದೇ ಬ್ಲಾಗಿಗೆ ನಾನು ಕೇವಲ ಓದುಗ ಮಾತ್ರವೇ ಆಗಿರುತ್ತೇನೆ. ಅವರು ಬರೆಯುತ್ತಾರೆ. ನಿಮ್ಮೊಡನೆ ನಾನು ಕೂಡ ಓದುತ್ತೇನೆ. ಅತೀ ಶೀಘ್ರದಲ್ಲಿ ಅವರು ನಿಮ್ಮೆದುರು ಬರುತ್ತಾರೆ. ನನ್ನ ಆಮಂತ್ರಣ ಕೆಲವರಿಗೆ ಈಗಾಗಲೇ ತಲುಪಿಯಾಗಿದೆ. ತೆರೆದಿದೆ ಮನ ಹಾಗು ಬ್ಲಾಗ್ ಮನೆ ಬಾಗಿಲು ಓ ಬಾ ಅತಿಥಿಯೆಂದು ಬರಮಾಡಿಕೊಂಡು ಸಂಭ್ರಮಿಸುವುದೊಂದೇ ಬಾಕಿ.

ಪತ್ರಿಕೆಗೆ ಅತಿಥಿ ಸಂಪಾದಕರು ಎಂಬ ಹಣೆಪಟ್ಟಿ ಹಚ್ಚಿ ಖ್ಯಾತನಾಮರನ್ನು ಕರೆಸುವ ಪರಿಪಾಠವಿದೆ. ನನ್ನ ಬ್ಲಾಗಿನಲ್ಲಿ ಈಗ ನಾನು ಶುರು ಮಾಡುತ್ತಿರುವ ಪ್ರಯತ್ನ ಕೂಡ ಅದೇ ತೆರನಾದದ್ದು. ಆದರೆ ಇದು ಪೂರ್ತಿ ಪತ್ರಿಕೆಗಳ ನಕಲಲ್ಲ. ಇಲ್ಲಿ ಕೂಡ ನನ್ನದೇ ಆದ ಸ್ವಲ್ಪ ಸ್ವಂತಿಕೆಯನ್ನ ಉಳಿಸಿಕೊಳ್ಳುತ್ತೇನೆ.

ನನ್ನ ಈ ಪ್ರಯತ್ನದಲ್ಲಿ ಒಂದು ವಿಶೇಷವಿದೆ. ನಾನೇ ಬರೆಯುವ ‘ಸಭ್ಯ ಪೋಲಿ ಕವನ , ‘ಆ ಒಂದು ದಿನದ ಡೈರಿ , ‘ಛೆ ..ಹೀಗಾಗಬಾರದಿತ್ತು , ‘ಜಗತ್ತಿಗೊಂದು ಪತ್ರ , ಮುಂತಾದವುಗಳನ್ನು ಅತಿಥಿಗಳಿಗೆ ಬಿಟ್ಟು ಕೊಡುತ್ತೇನೆ. ಅವರು ಅವರದೇ ಆದ ಶೈಲಿಯಲ್ಲಿ ಬರೆದು ತಂದು ನನ್ನ ಕೈಗಿಡುತ್ತಾರೆ .ನಾನು ಅವುಗಳನ್ನ ತಂದು ಬ್ಲಾಗಿನಲ್ಲಿ ಹಾಕಿ ನಿಮ್ಮೆದುರು ಇಡುತ್ತೇನೆ.

ನಾನಂತೂ ಅತಿಥಿಗಳ ಬರುವಿಕೆಯನ್ನ ತುಂಬಾ ಕಾತರದಿಂದ ಕಾಯುತ್ತಿದ್ದೇನೆ. ನಾನೇ ಬರೆಯುತ್ತಿದ್ದ ಒಂದಿಷ್ಟು ವಿಷಯಗಳು. ವಿಭಿನ್ನ ಹಿನ್ನೆಲೆಯ ಅತಿಥಿಗಳು. ಅವರವರದೇ ಆದ ವಿಶಿಷ್ಟ ಬರಹದ ಶೈಲಿಗಳು. ಒಂದೇ ಕಾರಣಕ್ಕೆ ಒಂದಕ್ಕಿಂತ ಒಂದು ವಿಭಿನ್ನವಾದ ಲೆಕ್ಕತಪ್ಪಿದ ಖುಷಿಗಳು. ಒಹ್ ! ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಯದೆ ಕೂರಲು ನನ್ನಿಂದಾಗುತ್ತಿಲ್ಲ. ವಿಚಾರ ಹುಟ್ಟುತ್ತಿದ್ದಂತೆ ಎತ್ತಿಕೊಂಡು ನಿಮ್ಮೆದುರು ಬಂದುಬಿಟ್ಟೆ. ಉಳಿದದ್ದು ಅದರ ಪಾಡಿಗೆ ಅದು ಆಗುತ್ತೆ ಬಿಡಿ..ಶುರುವಿಗಿರುವ ವಿಘ್ನ ಹರಿವಿಗಿಲ್ಲ.

ಶ್ರಾವಣದ ಮಳೆ ನಿಮ್ಮೆಲ್ಲರ ಬೆಂಬಲದಿಂದ ಸುರಿಯುತ್ತಲೇ ಇದೆ. ಇಲ್ಲಿ ನಾನೇ ಬಾನು. ನಾನೇ ಮುಗಿಲು. ಆದರೆ ಇನ್ನು ಮುಂದೆ ಶ್ರಾವಣದ ಮಳೆಯ ಮಳೆಗಾಲದ ಲೆಕ್ಕಾಚಾರ ಬದಲಾಗಲಿದೆ. ಇನ್ನು ಮುಂದೆ ಕೂಡ ಬಾನು ನಾನೇ. ಆದರೆ ಅತಿಥಿಗಳು ಬರುವ ಘಳಿಗೆಯಲ್ಲಿ ಅವರೇ ಮುಗಿಲು. ನಡುವೆ ಎಲ್ಲಾದರೂ ಖುಷಿಯ ಬಿಸಿಲುಕೋಲು ಇಣುಕಿದರೆ ,ಅದು ನಾನೇ. ಬಿಸಿಲು ಮಳೆಯ ಸೂರಿನಡಿ ಸಂಭ್ರಮದ ಕಾಮನಬಿಲ್ಲು ಕಟ್ಟಿದರೆ , ಅದು ನಾನೇ. ಕೊನೆಗೆ ಸುರಿವ ಮಳೆಯಲ್ಲಿ ನೆನೆಯುತ್ತ ,ಮಳೆಗೆ ಬೊಗಸೆಯೊಡ್ಡಿ ನಿಲ್ಲುವ, ಹರಿವ ಮಳೆಯ ನೀರಿನಲ್ಲಿ ಕಾಗದದ ದೋಣಿ ಮಾಡಿ ತೇಲಿ ಬಿಡುವ ಅಚ್ಚರಿಯ ಪುಟ್ಟನೂ ನಾನೇ. ಮುಗಿಲಾಗುವ .ಮುಗಿಲು ಮಳೆಯಾಗುವ ಕೆಲಸವನ್ನ ಈಗ ಗುತ್ತಿಗೆಗೆ ಕೊಟ್ಟು ನಾನು ಸುಮ್ಮನೆ ಸುರಿವ ಮಳೆಯಡಿನಿಲ್ಲುವ ,ನನ್ನದೇ ಬಾನಿನಡಿ ನೆಲದ ಮೇಲೆ ನಿಂತು ಸಂಭ್ರಮಿಸುವ ಖುಷಿಯ ಹೊಸಾ ಆಯಾಮಕ್ಕೆ ನನ್ನನ್ನು ನಾನು ತೆರೆದುಕೊಳ್ಳುತ್ತಿದ್ದೇನೆ, ನಿಮ್ಮೆಲ್ಲರ ಬೆಂಬಲ ಎಂದಿನಂತೆ ಇರಲಿ ಎಂಬ ಹಾರೈಕೆಯಲ್ಲಿ ಹಾಗು ಎಂದಿನಂತೆ ಇದ್ದೇ ಇರುತ್ತೆ ಎಂಬ ನಂಬಿಕೆಯ ಪರಮಾವಧಿಯಲ್ಲಿ.

Sunday, February 6, 2011

ನಾಯಿಗಳು .....

....

ಡೊಂಕುಬಾಲದಂಥ ನಾಯಕರೇ ನೀವು ಹೊಟ್ಟೆಗೆ ಏನು ತಿನ್ತಿರೀ??

ನನಗೊಬ್ಬಳು ಅತ್ತೆಯಿದ್ದಾಳೆ.ಅಪ್ಪನ ಅಕ್ಕ. ಆಕೆ ನಾಯಿಗೆ ನಾಯಕರು ಎನ್ನುತ್ತಿದ್ದಳು. ನಾಯಿಯನ್ನು ಎಲ್ಲರೂ ‘ಕುರು ಕುರು ಕುರೋಯ್ ಎಂದು ಕರೆಯುವುದು ರೂಢಿ. ಹಾಗೆ ಈ ನಾಯಿ ಮತ್ತು ಕುರು ಕುರು ಸೇರಿ ‘ನಾಯಿಕುರು’ ಎಂದಾಗಿ ಮುಂದೆ ಅದು ನಾಯಕರು ಎಂದಾಯಿತೋ ಅಥವಾ ಡೊಂಕುಬಾಲದ ನಾಯಕರೆ ಎಂಬಲ್ಲಿಂದ ಎತ್ತಿಕೊಂಡು ಅತ್ತೆ ನಾಯಿಗಳಿಗೆ ನಾಯಕರು ಎನ್ನುತ್ತಿದ್ದಳೋ ಗೊತ್ತಿಲ್ಲ. ಈಗೀಗ ಪೇಪರುಗಳಲ್ಲಿ ರಾಜಕೀಯದ ವಿಷಯಗಳು ಬಂದಾಗ ಈ ‘ನಾಯಕರುಗಳು’ ಎಂಬ ಪದ ಕಂಡಾಗ ನನಗೆ ಅತ್ತೆ ನೆನಪಾಗುತ್ತಾಳೆ. ಆಕೆ ಹೇಳುತ್ತಿದ್ದ ‘ನಾಯಕರು’ ನೆನಪಾಗುತ್ತೆ. ಡೊಂಕುಬಾಲದ ನಾಯಕರೇ ನೀವೇನೂಟವ ಮಾಡುವಿರಿ ಎಂಬುದು ಪುರಂದರ ದಾಸರು ಹಾಡಿದ್ದು. ಇದನ್ನೇ ರಾಜಕೀಯ ನಾಯಕರುಗಳ ವಿಷಯದಲ್ಲಿ ‘ ಡೊಂಕುಬಾಲದಂಥ ನಾಯಕರೇ ನೀವು ಹೊಟ್ಟೆಗೆ ಏನು ತಿಂತೀರಿ ‘ ಎಂದು ಸರಳವಾಗಿ ಈಗಿನ ಕಾಲಕ್ಕೆ ತಕ್ಕಂತೆ ಬಾಯಿಮಾತಿಗೆ ಬದಲಾಯಿಸಿಕೊಳ್ಳಬಹುದು ಎಂಬ ಅದ್ಭುತ ಯೋಚನೆ ಹೊಳೆಯುತ್ತೆ. ಜೊತೆಗೆ ಅಂಥಾ ನಾಯಕರನ್ನು ಆರಿಸಿಕಳಿಸಿದ ನಾವು ಕುರಿಗಳು ಹಾಗು ನಮ್ಮದು ನಾಯಿಪಾಡು ಎಂಬುದು ಕೂಡ. ಪುರಂದರ ದಾಸರು ಲೋಕದ ಡೊಂಕನ್ನು ತಿದ್ದಲು ಡೊಂಕು ಬಾಲದ ನಾಯಕರೇ ಎಂದು ಎಷ್ಟು ಮಾರ್ಮಿಕವಾಗಿ ಹಾಡು ಹೊಸೆದುಬಿಟ್ಟರಲ್ಲ ಎನ್ನಿಸಿ ಕೆಲವೊಮ್ಮೆ ಖುಷಿಯಾಗುತ್ತೆ. ಮರುಕ್ಷಣವೇ ಲೋಕದ ಡೊಂಕು ತಿದ್ಡುವ ಭರದಲ್ಲಿ ನಾಯಿಗಳನ್ನ ಉದಾಹರಣೆಯಾಗಿಟ್ಟುಕೊಂಡು ,ಹೀನಾತಿಹೀನ ಮಂದಿಯನ್ನ ನಾಯಿಗಳಿಗೆ ಹೋಲಿಸಿ ಸುಖಾಸುಮ್ಮನೆ ಪಾಪದ ನಾಯಿಕುಲಕ್ಕೆ ಅವಮಾನ ಮಾಡಿಬಿಟ್ಟರಲ್ಲ ಎಂದು ನಾಯಿಗಳ ಮೇಲೆ ಅನುಕಂಪಕ್ಕೆ ಈಡಾಗುತ್ತೇನೆ .ದಾಸರು ಡೊಂಕುಬಾಲವನ್ನಷ್ಟೇ ತಮ್ಮ ಹಾಡಿನಲ್ಲಿ ಉಳಿಸಿಕೊಂಡು ನಾಯಿಗಳನ್ನು ಅವುಗಳ ಪಾಡಿಗೆ ಸುಮ್ಮನೆ ಬಿಟ್ಟರೂ ಬಿಡಬಹುದಿತ್ತೆಂದು ಅಂದುಕೊಳ್ಳುತ್ತೇನೆ.

ನಾಯಿಗೆ ಅದರದೇ ಆದ ನಾಯಿಪಾಡು.ನಮಗೆ ನಮ್ಮದೇ ಆದ ನಾಯಿಪಾಡು ...

ನಾನಿರುವ ಮನೆಯ ಓನರ್ ಮನೆಯಲ್ಲಿ ಈ ವೊಡಾಫೋನ್ ನಾಯಿ ಜಾತಿಯ ಒಂದು ನಾಯಿಯಿದೆ. ತಿಂಗಳಿಗೆ ಅದನ್ನು ನಿಭಾಯಿಸುವ ಬಾಬ್ತು ಕೆಲವು ಸಾವಿರದಷ್ಟು ಎಂದು ಓನರ್ ಆಂಟಿ ಹೇಳುವುದನ್ನ ಕೇಳಿದ್ದೇನೆ. ಅದರ ಸ್ನಾನಕ್ಕೆ ನಾಯಿಗಳಿಗೆಂದೇ ಮೀಸಲಾದ ವಿಶೇಷ ಶಾಂಪೂ ಹಾಗು ಸೋಪು. ಅದರದ್ದು ಡೊಂಕು ಬಾಲವಲ್ಲ.ನೀಟಾಗಿ ಟ್ರಿಮ್ ಮಾಡಿದ ಮೊಂಡು ಬಾಲ. ನೀವೇನೂಟವ ಹಾಕಿದಿರಿ ಎಂದು ಓನರ್ ಆಂಟಿಯನ್ನು ಎಂದು ಕೇಳಿದರೆ ಉತ್ತರ ಬ್ರ್ಯಾಂಡೆಡ್ ಫುಡ್ದು. ಮಲಗಲಿಕ್ಕೆ ಅದಕ್ಕೆಂದೇ ವಿಶೇಷ ಬೆಡ್ಡು. ಇದನ್ನೆಲ್ಲಾ ನೋಡುವಾಗ ಸಿಟಿಯಲ್ಲಿ ಮನುಷ್ಯರಾಗಿ ಇರುವುದರಕ್ಕಿಂತ ಸಾಕಿದ ನಾಯಿಯಾಗಿ ಇದ್ದು ಬಿಡುವುದೇ ವಾಸಿ ಎನ್ನಿಸಿ ಬಿಡುತ್ತೆ. ಯಾವ ತಾಪತ್ರಯಗಳಿಲ್ಲ.ತಲೆಬಿಸಿಯಿಲ್ಲ .ತಿಂದುಂಡು ಅಡ್ಡಾಡಿಕೊಂಡು ಹಾಯಾಗಿ ಇದ್ದುಬಿಡಬಹುದು.

ಅದೊಂದು ದಿನ ಸಂಜೆ ಓನರ್ ಆಂಟಿ ನಾಯಿಯನ್ನು ಜೊತೆಗೆ ಕಟ್ಟಿಕೊಂಡು ಎಂದಿನಂತೆ ವಾಕಿಂಗ್ ಹೊರಟಿದ್ದರು. ಅದು ಆಂಟಿಯ ವಾಯುವಿಹಾರಕ್ಕೆ ಹಾಗು ಜೊತೆಗೆ ನಾಯಿಯ ಬಹಿರ್ದೆಸೆಗೆ ಮೀಸಲಾದ ಸಮಯ. ಆಂಟಿ ನಡೆದು ವ್ಯಾಯಾಮವಾದಂತೆ ಆಗಿ ಹಗುರಾಗುತ್ತಿದ್ದರು.ಅತ್ತ ನಾಯಿ ತನ್ನ ಪಾಲಿನ ಭಾರವನ್ನ ಹೊರದಬ್ಬಿ ಹಗುರಾಗುತ್ತಿತ್ತು. ಸ್ವಾಮಿಕಾರ್ಯ ಹಾಗು ಸ್ವಕಾರ್ಯ ನೆರವೇರುವ ಘಳಿಗೆಯದು. ಅಂದು ಕೂಡ ಆ ಘಳಿಗೆ ಎಂದಿನಂತೆ ಯಾವುದೇ ವಿಘ್ನಗಳಿಲ್ಲದೆ ಸಂಪನ್ನವಾಯಿತು.ನಾಯಿ ಹಾಗು ಆಂಟಿ ವಾಪಸ್ಸು ಮನೆಯ ದಾರಿ ಹಿಡಿದು ಹೊರಟಿದ್ದರು. ಮನೆಯ ಎದುರಿನ ರಸ್ತೆಯ ತಿರುವಲ್ಲಿ ನಮ್ಮ ಓನರ್ ಆಂಟಿಗೆ ಇನ್ನೊಬ್ಬರು ಪರಿಚಿತ ಆಂಟಿ ಸಿಕ್ಕು ಮಾತಿಗೆ ನಿಂತರು. ಅದೇ ಸಮಯಕ್ಕೆ ಅದೇ ತಿರುವಲ್ಲಿ ಒಂದು ಬೀದಿನಾಯಿಯ ಪ್ರವೇಶವಾಯಿತು. ಅತ್ತ ಓನರ್ ಆಂಟಿ ಇನ್ನೊಂದು ಆಂಟಿಯ ಜೊತೆ ಮಾತಾಡುತ್ತಿದ್ದರೆ ಇತ್ತ ಬೀದಿ ನಾಯಿ ಹಾಗು ಓನರ್ ಆಂಟಿಯ ವೊಡಾಫೋನ್ ನಾಯಿಯ ನಡುವೆ ಪ್ರೇಮಾಂಕುರವಾಗಿ ಹೋಗಿತ್ತು. ಪ್ರಕೃತಿಯ ಮೂಲಭೂತ ಹಸಿವಿಗೆ ಜಾತಿಯೆಲ್ಲಿ? ಬೇಧವೆಲ್ಲಿ? ಬೀದಿ ನಾಯಿ ಹಾಗು ವೊಡಾಫೋನ್ ಜಾತಿನಾಯಿ ಎಂಬ ತಾರತಮ್ಯವೆಲ್ಲಿ ? ನೋಡು ನೋಡುತ್ತಿದ್ದಂತೆ ಆಂಟಿ ಮನೆಯ ನಾಯಿ ಬೀದಿ ನಾಯಿಯ ಜಾಡು ಹಿಡಿದು ಹಿಂದಿನಿಂದ ಮೂಸುತ್ತ ಹೊರಡಲು ಅನುವಾಗಿ ಆಂಟಿಯ ಕೈಯಿಂದ ತಪ್ಪಿಸಿಕೊಳ್ಳಲು ಕೊಸರಾಡತೊಡಗಿತು. ಕೊನೆಗೆ ಆಂಟಿ ಬೀದಿನಾಯಿಯನ್ನು ಓಡಿಸಿ ತಮ್ಮ ನಾಯಿಯೊಂದಿಗೆ ಮನೆಗೆ ಬಂದು ಬಿಟ್ಟರು. ಅತ್ತ ಆ ಬೀದಿ ನಾಯಿ ಕೊಂಚ ದೂರ ಓಡಿ ಹೋಗಿ ನಿಂತುಕೊಂಡು, ಓನರ್ ಆಂಟಿಯ ಮನೆಯ ದಿಕ್ಕಿನಲ್ಲಿ ಆಸೆಯಿಂದ ನೋಡುತ್ತಿತ್ತು ವೊಡಾಫೋನ್ ನಾಯಿ ಬಂದರೂ ಬರಬಹುದೆಂಬ ನಿರೀಕ್ಷೆಯಲ್ಲಿ. ಇತ್ತ ನಮ್ಮ ವೊಡಾಫೋನ್ ನಾಯಿ ವಿರಹವೇದನೆಯಲ್ಲಿ ತುಂಬಾ ಹೊತ್ತಿನ ತನಕ ಅಂಡು ಸುಟ್ಟ ಬೆಕ್ಕಿನಂತೆ ಕುಯ್ ಗುಡುತ್ತಿತ್ತು .ಹಸಿದವನ ಸಂಕಟ ಅವನಿಗಷ್ಟೇ ಗೊತ್ತು.

ಮರುದಿನ ಬೆಳಿಗ್ಗೆಯೇ ಓನರ್ ಆಂಟಿ ನಾಯಿಯನ್ನು ಕಾರಿನಲ್ಲಿ ತುಂಬಿಕೊಂಡು ನಾಯಿಗಳ ಕ್ಲಿನಿಕ್ ಗೆ ಕರೆದುಕೊಂಡು ಹೋಗಿಬಿಟ್ಟರು.ಅಲ್ಲಿ ಡಾಕ್ಟರ್ ಏನು ಮಾಡಿ ಕಳುಹಿಸಿದರೋ ಗೊತ್ತಿಲ್ಲ. ಕ್ಲಿನಿಕ್ ಗೆ ಹೋಗಿಬಂದ ಘಳಿಗೆಯಿಂದ ನಾಯಿ ಕುಯ್ಗುಡುವುದು ನಿಂತುಹೋಯಿತು. ಮೊನ್ನೆ ಮೊನ್ನೆ ಅದಕ್ಕೆ ಮೂರು ಮರಿ ಹುಟ್ಟಿ ,ಪ್ರತಿ ಮರಿ ತಲಾ ಇಪ್ಪತ್ತು ಸಾವಿರಕ್ಕೆ ಮಾರಾಟವಾಗಿಯೂ ಹೋದವು. ಪಾಪ ವೊಡಾಫೋನ್ ನಾಯಿ. ಮಾಡಿದ್ದು ಏನೂ ಇಲ್ಲ.ಆದರೂ ಎಲ್ಲ ಆಗಿ ಹೋಯಿತು.

ಈ ಘಟನೆ ಆದ ನಂತರ ಸಾಕಿದ ನಾಯಿಗಿಂತ ಮನುಷ್ಯ ಜನ್ಮವೇ ಉತ್ತಮ ಎಂದುಕೊಂಡೆ. ಈ ವೊಡಾಫೋನ್ ನಾಯಿ ಬೀದಿನಾಯಿಯಾಗಿಯಾದರೂ ಹುಟ್ಟಬಹುದಿತ್ತು. ಕೊನೆಪಕ್ಷ ಸ್ವಚ್ಛಂದವಾಗಿ ಇದ್ದು ಬಿಡಬಹುದಿತ್ತೆಂದು ಅಂದುಕೊಂಡೆ. ಕೊನೆಗೆ ನನ್ನ ಆ ಅಭಿಪ್ರಾಯ ಕೂಡ ಬಹುಬೇಗ ಸುಳ್ಳೆಂದು ಸಾಬೀತಾಗಿ ಹೋಯಿತು. ನಾನು ತಿಂಡಿಗೆ ಹೋಗುವ ಹೋಟೆಲ್ ಬಳಿ ಒಂದು ನಾಯಿ ಸದಾ ಓಡಾಡುತ್ತಿರುತ್ತೆ. ಖಾಕಿ ಬಟ್ಟೆಯಲ್ಲಿ ಯಾರೇ ಕಂಡರೂ ಅದು ಅವರ ಮೇಲೇರಿ ಹೋಗುತ್ತೆ. ಕೊನೆಗೆ ನಾನು ಅವರಿವರ ಬಳಿ ವಿಚಾರಿಸಿ ನಾಯಿಯ ಆ ಸ್ವಭಾವಕ್ಕೆ ಕಾರಣ ತಿಳಿದುಕೊಂಡೆ. ಒಮ್ಮೆ ಖಾಕಿ ಬಟ್ಟೆ ತೊಟ್ಟ ಕಾರ್ಪೋರೇಶನ್ ಮಂದಿ ಈ ನಾಯಿಯನ್ನು ಹಿಡಿದು ಬೀಜ ತೆಗೆದು ಕೈತೊಳೆದುಕೊಂಡು ಬಿಟ್ಟರಂತೆ . ಬೀಜ ಹೋದ ದುಃಖಕ್ಕೆ ಪ್ರತೀಕಾರವಾಗಿ ನಾಯಿ ಈಗ ಖಾಕಿ ಬಟ್ಟೆಯಲ್ಲಿ ಯಾರೇ ಕಂಡರೂ ಅವರ ಮೇಲೇರಿ ಹೋಗುತ್ತಿರುತ್ತೆ. ವೊಡಾಫೋನ್ ನಾಯಿ ಏನು ಮಾಡದಿದ್ದರೂ ಎಲ್ಲ ಆಗಿಹೋಯಿತು.ಅದರ ಕಥೆ ಹಾಗಾಯಿತು. ಈ ನಾಯಿ ಏನೂ ಮಾಡುವಂತಿಲ್ಲ .ಇದರ ಕಥೆ ಹೀಗಾಗಿಹೋಯಿತು.

ಇವೆರಡು ನಾಯಿಗಳ ನಾಯಿಪಾಡನ್ನು ನೋಡಿ ನನಗೆ ಜ್ಞಾನೋದಯವಾಯಿತು. ವೊಡಾಫೋನ್ ನಾಯಿಗೆ ಅದರದೇ ಆದ ನಾಯಿಪಾಡು.ಈ ಬೀದಿ ನಾಯಿಗೆ ಇನ್ನೊಂದು ತೆರನಾದ ನಾಯಿಪಾಡು.ನಮಗೆ ನಮ್ಮದೇ ಆದ ನಾಯಿಪಾಡು.

ಕೊನೆಯ ಮಾತು ....

ನಿಮ್ಮ ಏರಿಯಾದ ನಾಯಿಗಳನ್ನು ಸೂಕ್ಷ್ಮವಾಗಿ ಗಮನಿಸಿ. ಮೊದಲಿನಿಂದಲೂ ನಿಮ್ಮ ಏರಿಯಾದಲ್ಲೇ ಇರುವ ನಾಯಿಗಳು ಬಾಲ ಬಿಚ್ಚಿಕೊಂಡು ಮೆರೆಯುತ್ತವೆ.ಹೊಸತಾಗಿ ಬೇರೆ ಕಡೆಯಿಂದ ಬಂದ ನಾಯಿಗಳು ತಮ್ಮ ಹಿಂದಿನ ಕಾಲುಗಳ ಸಂದಿಯಲ್ಲಿ ಬಾಲವನ್ನು ಬಚ್ಚಿಟ್ಟುಕೊಂಡು ಓಡಾಡುತ್ತವೆ. ಹೀಗೆಂದು ಮೊನ್ನೆ ಪ್ರಜಾವಾಣಿಯಲ್ಲಿ ಉಷಾ ಕಟ್ಟಿಮನಿಯವರು ತಮ್ಮ ಲೇಖನದಲ್ಲಿ ಬರೆದುಕೊಂಡಿದ್ದರು ..

ಪ್ರಜಾವಾಣಿಯಲ್ಲಿ ಆ ಲೇಖನವನ್ನು ಓದಿದ ನಂತರ ನಾನು ನನ್ನ ಏರಿಯಾದ ಎಲ್ಲ ನಾಯಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ . ಅವುಗಳ ಬಾಲ ಎಲ್ಲಿದೆಯೆಂದು ಕುತೂಹಲದಿಂದ ನೋಡುತ್ತೇನೆ. ಇನ್ನು ಸ್ವಲ್ಪ ಕಾಲ ನನ್ನ ಈ ಸರ್ವೆ ಚಾಲ್ತಿಯಲ್ಲಿರುತ್ತೆ. ಇದೊಳ್ಳೆ ಮಜವಾಗಿದೆ .:) :) ..